Monday 19 June 2017

ವ್ಯಾಪಾರಿ



PC: Google

ಸರಿರಾತ್ರಿಯಲ್ಲಿ ತಂಗಾಳಿಯ ಲಾಲಿತ್ಯ 
ಹೆಜ್ಜೆಯ ಸಪ್ಪಳದಲ್ಲಿ ಕಾಡುತ್ತಿದ್ದ ಸಾಂಗತ್ಯ ;
ಮಬ್ಬು ಮಬ್ಬಾದ ಮುಸುಕಲ್ಲಿ
ಛಾಯೆಯ ಸಪ್ತಪದಿ; ಯಾರಲ್ಲಿ?!
ಅವನು ವ್ಯಾಪಾರಿ
ಊರು  ಕೇರಿಯ ದಿಶೆಯಿಲ್ಲದೆ ತಿರುಗುವ ಸಂಚಾರಿ!
ಕನಸಿನ ಕೈಚೀಲ ಹಿಡಿದಿದ್ದ , ಅಲ್ಲಲ್ಲಿ ಹರಿದಿತ್ತು;
ಬಣ್ಣದ ಬಣ್ಣದ ತೇಪೆಯೊಂದಿಗೆ ಜೋಳಿಗೆ ಇಣುಕುತ್ತಿತ್ತು.

ವಶೀಕರಣದ ವಿದ್ಯೆ ಅವನಿಗದು ಸಿದ್ಧ!
ಕಾಮನಬಿಲ್ಲುಗಳ ಸರಕುಗಳ ಸದ್ದಿಲ್ಲದೆ ಮಾರಿದ್ದ
ಸ್ವಪ್ನಗಳ ಸಾಲವದು!
ನಾ ಅನಿವಾರ್ಯದ ಸಾಲಗಾರನಾದೆನೇ?
ಇಲ್ಲ! ತೀರಿಸುವ ಉಮೇದಿತ್ತು ; ಮತ್ತೊಮ್ಮೆ ಎರವಲು ಪಡೆಯುವ ಆಸೆಯೂ..

ನಶೆಯ-ಉಷೆಯ ಕಣ್ಣಾಮುಚ್ಚಾಲೆಯಲಿ 
ಸರಕು ಖಾಲಿಯಾಗಿತ್ತು; ಬಣ್ಣ ಮಾಸಿತ್ತು;
ಮತ್ತೆ ಕಾಯುತಿರುವೆ ತಾಮಸದ ತಿಳಿಬೆಳಕ ನೆರಳಲ್ಲಿ;
ಪಡೆವ ಬಯಕೆಯೋ? ತೀರಿಸುವ ಉನ್ಮಾದವೋ? ತಿಳಿಯದು;
ಇರಲಿ ನನ್ನಲ್ಲಿಯೇ ಈ ಋಣಭಾರ;
ಆಗಾಗ ಇದ್ದುಬಿಡು ! ಕೊಡುವೆ ಉಸಿರ ಕಾವ ಬಾಡಿಗೆ;
ಮತ್ತೊಮ್ಮೆ ಸಂಧಿಸೋಣ, ನೆರಳು ಬೆಳಕಿನ ಲಜ್ಜೆಯಲ್ಲಿ!
ನಡೆಯಲಿ ವ್ಯಾಪಾರ ವಿನಿಮಯ; 
ಮತ್ತೆಂದೂ ತೀರಿಸುವ ಮಾತೇ ಬೇಡ!

~ಶರಧಿ 

No comments:

Post a Comment