Monday, 14 August 2017

ಅವಳು!
PC: google

ಅವನಿಗೆ ಅವಳೆಂದರೆ ಅದೇನೋ ಪ್ರೀತಿ. ಅವಳ ಕೈತುತ್ತಿಗೆ ತುಂಬಿದ ಹೊಟ್ಟೆಯಲ್ಲೂ ಒಂದಷ್ಟು ಜಾಗ. ಅವಳ ಹೃದಯದ ಕೂಗಿಗೆ ಅವನೆಂದಿಗೂ ಹತ್ತಿರ. ಜಗತ್ತಿಗೆ ಒಡೆಯನಾದರೂ ಅವಳೆದುರು ಪುಟ್ಟ ಮಗು. ಪರರ ಕಗ್ಗಂಟು ಬಿಡಿಸುವ ಅವನು, ತನ್ನ ಮನಸ್ಸಿನ ಮಾತಿಗೆ, ಕಿವಿ ಅವಳೇ ಆಗಬೇಕು. ತಾಯಿಯ ಪ್ರೀತಿಯ ಮಗ, ತಂದೆಯ ಹೆಮ್ಮೆ, ಸ್ನೇಹಿತರ ಪರಮಾಪ್ತ, ಹೆಂಗಳೆಯರ ಕಣ್ಮಣಿ. ಅವಳಿಗೆ ಅವನೇ ಎಲ್ಲ. ಅವನ ಬಳಗದಲ್ಲಿ ಅವಳಿಗೊಂದು ವಿಶೇಷ ಸ್ಥಾನ.

ಕಷ್ಟ ಎಂದಾಗ ಕರಗುವ ಹೃದಯ, ಇನ್ನು ಅವಳ ನೋವಿಗೆ ಸ್ಪಂದಿಸದೆ ಇರನೇ ? ಅವಳಿಗೋ ಧೈರ್ಯ ಹುಟ್ಟು ಗುಣ. ಸಕಲ ಕಲೆಯು ಅವಳಿಗೆ ಸಿದ್ಧ. ಹಠ ಅವಳ ವ್ಯಕ್ತಿತ್ವದ ಶೋಭೆ.ಅಪ್ರತಿಮ ಸುಂದರಿಯ ಸೌಂದರ್ಯಕ್ಕೆ ಸೋಲದವರೇ ಇಲ್ಲ. ಜಗದೇಕ ವೀರರ ಪತ್ನಿ... ಇನ್ನು ಕಷ್ಟದ ಮಾತೆಲ್ಲಿ? ಎನ್ನುವಾಗಲೇ ಅವಮಾನ-ಅಪಮಾನ-ಅಪಹಾಸ್ಯದ ಕೂಪಕ್ಕೆ ನೂಕಲ್ಪಡುತ್ತಾಳೆ.ಎಂದೂ ಸೋಲನೊಪ್ಪದ ಜಾಯಮಾನ ಅವಳದು. ಎಷ್ಟಾದರೂ ಅವನ ತಂಗಿಯಲ್ಲವೇ? ಅಷ್ಟಾದರೂ ಕಣ್ಣೀರು -ದುಃಖ ಅವಳ ಆವರಿಸುತ್ತದೆ.  ತನ್ನೈವರು ಮಕ್ಕಳ ಸಾವನ್ನು ಕಣ್ಣ ಮುಂದೆಯೇ ಕಳೆದುಕೊಂಡ ನತದೃಷ್ಟ ತಾಯಿಯಾಗುತ್ತಾಳೆ, ಅಲ್ಲೂ ಕುಗ್ಗ,ಸಂಯಮ ಕಳೆದುಕೊಳ್ಳುವ ಜಾಯಮಾನ ಅವಳದಲ್ಲ.  
ಅಲ್ಲೂ ಅವಳಿಗೆ ಸಾಂತ್ವನದ ಹನಿಯಾಗುವುದು ಅವನೇ!

ಅವಳ ನಂಬಿಕೆ ಅವನಲ್ಲಿ ಮಾತ್ರ! ಅವಳ ಕಣ್ಣಬಿಂದುಗಳು ಕಾಣುವುದು ಅವನಿಗೆ ಮಾತ್ರ! ಅದು ರಕ್ತಸಂಬಂಧದ ಬೇಲಿಯೊಳಗಿನ ಬಂಧವಾಗಿರಲಿಲ್ಲ. ಅಲ್ಲಿ ಪ್ರೀತಿ ಇದೆ. ಕಾಳಜಿ ಇದೆ. ವಾತ್ಸಲ್ಯದ ಒಡನಾಟವಿದೆ. ತುಂಟ ನಗೆ ಇದೆ. ಹುಸಿ ಮುನಿಸಿದೆ. ಪ್ರೇಮದ ಬಂಧವಿದೆ. ಭಕ್ತಿಯ ಭಾವವಿದೆ!
ಅವಳ ಸೌಂದರ್ಯಕ್ಕೆ ಅವನದೇ ಬಣ್ಣವಿದೆ.ಲೋಕ ಅವಳನ್ನು ಅವನ ಸಖಿ, ಸೋದರಿ, ಸ್ನೇಹಿತೆ ಎಂದಿತು. ಜಗತ್ತಿಗೆ ಅವಳು ದ್ರೌಪದಿ, ಯಾಜ್ಞಸೇನಿ !

ಆದರೆ ಅವನು ಅವಳಿಗೆ ಕೊಟ್ಟ ಹೆಸರು ಕೃಷ್ಣೆ! 
ಅವಳು ಅವನದೇ ಅಂಶವಾಗಿದ್ದಳು!

Monday, 19 June 2017

ವ್ಯಾಪಾರಿPC: Google

ಸರಿರಾತ್ರಿಯಲ್ಲಿ ತಂಗಾಳಿಯ ಲಾಲಿತ್ಯ 
ಹೆಜ್ಜೆಯ ಸಪ್ಪಳದಲ್ಲಿ ಕಾಡುತ್ತಿದ್ದ ಸಾಂಗತ್ಯ ;
ಮಬ್ಬು ಮಬ್ಬಾದ ಮುಸುಕಲ್ಲಿ
ಛಾಯೆಯ ಸಪ್ತಪದಿ; ಯಾರಲ್ಲಿ?!
ಅವನು ವ್ಯಾಪಾರಿ
ಊರು  ಕೇರಿಯ ದಿಶೆಯಿಲ್ಲದೆ ತಿರುಗುವ ಸಂಚಾರಿ!
ಕನಸಿನ ಕೈಚೀಲ ಹಿಡಿದಿದ್ದ , ಅಲ್ಲಲ್ಲಿ ಹರಿದಿತ್ತು;
ಬಣ್ಣದ ಬಣ್ಣದ ತೇಪೆಯೊಂದಿಗೆ ಜೋಳಿಗೆ ಇಣುಕುತ್ತಿತ್ತು.

ವಶೀಕರಣದ ವಿದ್ಯೆ ಅವನಿಗದು ಸಿದ್ಧ!
ಕಾಮನಬಿಲ್ಲುಗಳ ಸರಕುಗಳ ಸದ್ದಿಲ್ಲದೆ ಮಾರಿದ್ದ
ಸ್ವಪ್ನಗಳ ಸಾಲವದು!
ನಾ ಅನಿವಾರ್ಯದ ಸಾಲಗಾರನಾದೆನೇ?
ಇಲ್ಲ! ತೀರಿಸುವ ಉಮೇದಿತ್ತು ; ಮತ್ತೊಮ್ಮೆ ಎರವಲು ಪಡೆಯುವ ಆಸೆಯೂ..

ನಶೆಯ-ಉಷೆಯ ಕಣ್ಣಾಮುಚ್ಚಾಲೆಯಲಿ 
ಸರಕು ಖಾಲಿಯಾಗಿತ್ತು; ಬಣ್ಣ ಮಾಸಿತ್ತು;
ಮತ್ತೆ ಕಾಯುತಿರುವೆ ತಾಮಸದ ತಿಳಿಬೆಳಕ ನೆರಳಲ್ಲಿ;
ಪಡೆವ ಬಯಕೆಯೋ? ತೀರಿಸುವ ಉನ್ಮಾದವೋ? ತಿಳಿಯದು;
ಇರಲಿ ನನ್ನಲ್ಲಿಯೇ ಈ ಋಣಭಾರ;
ಆಗಾಗ ಇದ್ದುಬಿಡು ! ಕೊಡುವೆ ಉಸಿರ ಕಾವ ಬಾಡಿಗೆ;
ಮತ್ತೊಮ್ಮೆ ಸಂಧಿಸೋಣ, ನೆರಳು ಬೆಳಕಿನ ಲಜ್ಜೆಯಲ್ಲಿ!
ನಡೆಯಲಿ ವ್ಯಾಪಾರ ವಿನಿಮಯ; 
ಮತ್ತೆಂದೂ ತೀರಿಸುವ ಮಾತೇ ಬೇಡ!

~ಶರಧಿ 

Wednesday, 7 June 2017

ನಾ ಮೀರಳೋ? ರಾಧೆಯೋ?ಹಗಲು ರಾತ್ರಿ ಭಿನ್ನವೆನಿಸದು
ಕನಸಿನಲ್ಲಿ ಕಾಡಿ ಎಚ್ಚರಿಸುವಾಗ,
ಎದ್ದರೂ ಮೈಮರೆಯುವಾಗ,
ಅಲ್ಲೆಲ್ಲೋ ಕೇಳಿದ ಕೊಳಲ ನಾದ..
ಮತ್ತೊಮ್ಮೆ ನವಿಲುಗರಿಯ ಸ್ಪರ್ಶ
ತನ್ಮಯತೆಯ ಅನುಭವವು ಆವರಿಸಿತಾಗ!
ನೀಲ ಮೇಘ ವರ್ಣದವ ನೀನು
ಎಂದಿಗೂ ನಿಗೂಢ
ಇದ್ದುಬಿಡಲೇ ನಾ ಸಖಿಯಾಗಿ? ಪ್ರಿಯ ರಾಧೆಯಾಗಿ?
ಒಮ್ಮೊಮ್ಮೆ ದೇವಕಿಯಾಗಿ!?
ನಾ ಮೀರಳೋ, ಭಾಮೆಯೊ?
ಅರಿವ ಆಸೆ ಎನಗಿಲ್ಲ.
ಕಡಲ ನೀರಿನಲ್ಲಿ ಬಿಂಬ ಹುಡುಕುವ ಹಂಬಲವೆನಗಿಲ್ಲ
ಆ ಪ್ರತಿ ಅಲೆಯಲ್ಲೂ ನಾ ಕಾಣಬೇಕು!
ಆ ಭಾವದಲ್ಲೇ ಬಂಧಿಯಾಗಬೇಕು!
ಅಲ್ಲಿಯೇ ಲೀನವಾಗಬೇಕು!

~ಶರಧಿ

Friday, 26 May 2017

ನೆರಳುಈ ಕಾನನದ ಕುಸುಮಕೆ
ಬೆಂಕಿಯ ಹೊತ್ತಿಸಿದೆಯಾ ದಾರಿಹೋಕ
ಸುಗಂಧದ ಆಸ್ವಾದ ಬೇಕಿರಲಿಲ್ಲ ನಿನಗೆ!
ಉಜ್ವಲದ ಜ್ವಾಲೆಯದೋ ನಿನಗೆ ಉಡುಗೊರೆ
ಪ್ರಜ್ವಲಿಸಿತು ಕಣ್ಣಲ್ಲಿ,ಮೈಯಲ್ಲಿ!
ಉರಿದು ಕೆಂಡವಾದ ನನಗೆ
ಮತ್ತೆ ಚಿಗುರುವ ಆಸೆ
ಆ ದುಂಬಿಯೇ ಜೊತೆಗಾರ
ಸುತ್ತಿಸಿ ಮುದ್ದಿಸಿ ಮತ್ತೆಲ್ಲೋ ಅಂಕುರಿಸಿದೆ;
ಬೆಳೆದು ಹೆಮ್ಮರವಾದೆ!
ಮತ್ತದೇ ದಾರಿಹೋಕನಿಗೆ ನೆರಳಾದೆ.

                                                        Pic: internet

Thursday, 18 May 2017

ಗುಪ್ತಗಾಮಿನಿ


ಗುಪ್ತಗಾಮಿನಿ

ಅವಳು ನಿಘೂಢ,
ಅವಳು ವಿಸ್ಮಯ,
ಕಡಲ ಅಬ್ಬರಕೆ ಮೆಚ್ಚಿದ ನಾವಿಕನು
ಮೀನಿನ ಹೆಜ್ಜೆಯ ತಿಳಿಯಬಯಸಿಹನು..
ಹುಡುಕಾಟ ನಡೆದಿಹುದು,
ಅಂತರಂಗದ ಮೃದಂಗವೇ ಸುಳಿವು
ವಾರಿಧಿಯ ಅಂತರಾಳಕೆ.
ಕಾಣದು,ಕೇಳದು..
ಅರಿವಾಗುವ ಮುನ್ನ ಅವಳು
ಹರಿಯುತಿಹಳು ಗುಪ್ತಗಾಮಿನಿಯಾಗಿ ಮತ್ತೆಲ್ಲೋ..ಸಾಗುತಿಹಳು.

PC: Google


Saturday, 1 April 2017

ಮುನಿಸು ತರವೇ…

    


     ಅಂದಿನಿಂದ ಒಬ್ಬರನ್ನೊಬ್ಬರು ನೋಡಿಲ್ಲ. ಬಹುಶಃ ತಿಂಗಳುಗಳೇ ಕಳೆಯಿತು. ಮೃದು ಸ್ಪರ್ಶದ ಅರಿವಿಲ್ಲ. ನಾವಿಬ್ಬರು ಜೊತೆಗಿದ್ದಾಗ ನನ್ನಲ್ಲಿ ಮೂಡುತ್ತಿದ್ದ ಹೊಳಪೇ ಇಂದು ಕಾಣದಾಗಿದೆ. ಒಂದಷ್ಟು ದಿನ ಆರಾಮಾಗಿದ್ದೆ. ನಿನ್ನ ನೆನಪೇ ಬಾರದ ಹಾಗೆ ಬದುಕುತ್ತಿದ್ದೆ.ಆದರೆ ಇಂದು..
ನೀನು ಬಹಳ ಕಾಡ್ತಿಯ. ನಿನ್ನ ನೆನೆದೊಡನೆ ಬಣ್ಣಗಳೇ ಬಲೆ ಕಟ್ಟುತ್ತವೆ. ಕಪ್ಪು -ಬಿಳುಪು, ನೀಲ ಸುವರ್ಣ ,ಹಸಿರು  ಕೆಂಪು ..ಮತ್ತಷ್ಟು ಮೊಗದಷ್ಟು ಬಣ್ಣಗಳ ಕಲಸಿಕೊಂಡು ನೀ ಮೂಡಿಸುತ್ತಿದ್ದ ಆ ಚಿತ್ತಾರಗಳಲ್ಲಿ ಬೆರೆತು ಹೋಗುತ್ತಿದ್ದೆ, ಕಲೆತು ಹೋಗುತ್ತಿದ್ದೆ. ಸ್ಮೃತಿಪಲಟದಲ್ಲಿ ನಿನ್ನ ಚಿತ್ರಗಳು ಇಂದಿಗೂ ಚಿರಪರಿಚಿತ. ನಾವಿಬ್ಬರು ಅದೆಷ್ಟು ಚಿತ್ರಗಳ ಬರೆದಿಲ್ಲ! ನಾವೇನು ಕಡಿಮೆ ಕಿತ್ತಾಡಿದ್ದೇವಾ! ಬಿಳಿ ಹಾಳೆಯೊಂದಿಗೆ ಏನೂ ಬರೆಯದ ನಾನು, ನೀ ಜೊತೆ ಇದ್ದರೆ ಸಾಕು ಸಂಪೂರ್ಣ ವರ್ಣಮಯ. ಬಣ್ಣಗಳಿಂದ ತುಂಬಿಹೋಗಿತ್ತು  ಖಾಲಿ ಕಾಗದ, ನನ್ನ ಜೀವನ!
ಆ ಮುನಿಸು ಶುರು ಆದದ್ದು ಹೇಗೋ ತಿಳಿಯದು.  ಅದೇಕೋ ಹೊಂದಾಣಿಕೆಯೇ ಇಲ್ಲ.  ನೀ ಬಿಡಿಸಿದ್ದು ನನಗೆ ಹಿಡಿಸದು, ನಾ ಯೋಚಿಸಿದ್ದು ನಿನಗೆ ತಿಳಿಯದು! ನಮ್ಮ ಈ ಕಿತ್ತಾಟದಲ್ಲಿ ಅದೆಷ್ಟು ಹಾಳೆಗಳು ಮುದುರಿ ಹೋಗಿವೆಯೋ ! ಅದೆಷ್ಟು ಬಣ್ಣಗಳು ಕಣ್ಣೀರು ಸುರಿಸಿದವೋ!ನಿನ್ನ ಸಹವಾಸವೇ ಬೇಡ ಎಂದು ನಿನ್ನ ನಿಧಾನವಾಗಿ ದೂರ ತಳ್ಳಿದೆ. ನೀನು ಅಷ್ಟೇ ಕಣ್ಣಿಗೆ ಕಾಣದ ಹಾಗೆ ಎಲ್ಲೋ ಅಡಗಿ ಕುಳಿತೆ. ಸ್ವಲ್ಪ ಕಾಲ ಮರೆತೆ. ಆದರೆ ಈಗ?
ಇಲ್ಲ! ನಿನ್ನ ಬಿಟ್ಟಿರಲು ನನಗೆ ಸಾಧ್ಯವಿಲ್ಲ. ನಿನ್ನ ಹಠವೇ ಗೆಲ್ಲಲಿ ಆದರೆ ಅದು ನನ್ನ ಸೋಲಲ್ಲ. ನನ್ನ ಗೆಲುವೂ ನಿನ್ನ ಜಯವೇ.ಆ ಸಾಂಗತ್ಯ, ಒಡನಾಟ ಮತ್ತೆ ಬೇಕು. ನನ್ನ ಭಾವದ ಹರಿವಿಗೆ ನೀನಲ್ಲದೆ ಮತ್ತಾವ ದಾರಿ ಹುಡುಕಲಿ. ಕುಂಚದ ಸಾಂಗತ್ಯವಲ್ಲದೆ ಬಣ್ಣಕೆ ಬದುಕಿಲ್ಲ!
ಈ ಬಣ್ಣ ಕರಗುವ ಮೊದಲೇ ಮೂಡಿಸುವ ಸುಂದರ ಚಿತ್ತಾರವ! ಅಳಿಸಲಾಗದ ಹಸ್ತಾಕ್ಷರವ!
                                                                                                   ಇಂತಿ ನಿನ್ನ ಪ್ರೀತಿಯ,       
                  ಬಣ್ಣಗಳ ಹುಡುಕಾಟದಲ್ಲಿ ಕಳೆದುಹೋಗಿರುವ , ಕುಂಚದ ಸಾಂಗತ್ಯ ಹಂಬಲಿಸುತ್ತಿರುವ  ಕಲಾವಿದೆ
          
                                                                                       

Tuesday, 6 September 2016

ರಾಧಾ -  ಮಾಧವ 

9ab643bd3fbb35020cfdc0fbc36c6ecf.jpg

                                                               ವರ್ಣನೆಗೆ ನಿಲುಕದ ಪ್ರೀತಿ                                                            ಭಾವ ಸಾನಿಧ್ಯದ ಕ್ಷಣದಲಿ 
ಮಾಧವನ ನೆನಪಿನ ಲಹರಿಯಲಿ 
ತೇಲುತಿರುವ ಮನದಿ...
ಉನ್ಮಾದ ಪ್ರೀತಿಯ ಕುರುಹು 
ಉತ್ಕಟ ಭಕ್ತಿಯ ಸುಳಿವು
        ಉಚ್ಛ್ರುಂಖಲ ಭಾವದಲಿ ಬಂಧಿಸುವ ಸಾಹಸ ಕೈಗೂಡದು ರಾಧೆ!
ನಿನ್ನೊಳಗಿನ ಮಾಧವ ಅವನೇ!
ಅವನೊಳಗಿನ ರಾಧೆಯು ನೀನೆ!