Tuesday 6 September 2016

ರಾಧಾ -  ಮಾಧವ 

9ab643bd3fbb35020cfdc0fbc36c6ecf.jpg

                                                               ವರ್ಣನೆಗೆ ನಿಲುಕದ ಪ್ರೀತಿ                                                            ಭಾವ ಸಾನಿಧ್ಯದ ಕ್ಷಣದಲಿ 
ಮಾಧವನ ನೆನಪಿನ ಲಹರಿಯಲಿ 
ತೇಲುತಿರುವ ಮನದಿ...
ಉನ್ಮಾದ ಪ್ರೀತಿಯ ಕುರುಹು 
ಉತ್ಕಟ ಭಕ್ತಿಯ ಸುಳಿವು
        ಉಚ್ಛ್ರುಂಖಲ ಭಾವದಲಿ ಬಂಧಿಸುವ ಸಾಹಸ ಕೈಗೂಡದು ರಾಧೆ!
ನಿನ್ನೊಳಗಿನ ಮಾಧವ ಅವನೇ!
ಅವನೊಳಗಿನ ರಾಧೆಯು ನೀನೆ!

Tuesday 26 April 2016

ಇಳೆಯ ಆರ್ತನಾದ



ಇಳೆಯ ಆರ್ತನಾದ 

ಬಿರು ಬಿಸಿಲಿನ ಅಟ್ಟಹಾಸವೋ
ಬರಿದಾದ ಬಿರುಕು ಭೂಮಿಯೋ
ಯಾರ ಬಳಿಯಲಿ ಬಿಕ್ಕಳಿಸಲಿ
ಈ ಬೇಗುದಿಯ, ಬಾಯಾರಿದ ಸಂಕಟವ!
ಹಸಿರ ಬಸಿರ ತುಂಬದ ಹತಾಷೆಯ!

ನದಿಯ ನಾದವದು ಕೇಳದಾಗಿದೆ
ಹಾಹಾಕಾರದ ಆಕ್ರಂದವೇ ಪ್ರತಿದ್ವನಿಸುತಿದೆ!
ಹಚ್ಚ ಹಸಿರ ಕಾನನವದು ಕಾಣದಾಗಿದೆ
ಅಳಲ ತೋಡಿಕೊಳ್ಳುವ ಮಡಿಲದು ಬರಿದಾಗಿದೆ
ಯಾರ ಬಳಿಯಲಿ ಬಿಕ್ಕಳಿಸಲಿ
ಬಾಯಾರಿದ ಸಂಕಟವ!
ಹಸಿರ ಬಸಿರ ತುಂಬದ ಹತಾಷೆಯ!

ಎಳೆ ಬಿಸಿಲ ಹಿತವು, ಕಲರವದ ಕಂಪು
ತುಂತುರು ಮಳೆಯ ತಂಪು
ಕಾಡುತಿಹುದು ಸ್ವಪ್ನದಂತೆ
ವಾಸ್ತವದ ಕೆಂಗಣ್ಣು ನೋಡುತಿಹುದು
ಎನ್ನ ಬಾಯಾರಿದ ಸಂಕಟವ!
ಹಸಿರ ಬಸಿರ ತುಂಬದ ಹತಾಷೆಯ!

ಪ್ರಕೃತಿ ನಾನು ಏಕಾಂಗಿಯಾದೆ
ಜೀವದ ಕುರುಹೇ ಕಾಣದಾಗಿದೆ
ಕಾರ್ಮೋಡವದು ಓಡುತಿಹುದು
ಎನ್ನ ಏಕಾಂಗಿ ಮಾಡಿಹುದು
ಅರಿಯದೆ ನನ್ನೀ ಬಾಯಾರಿದ ಸಂಕಟ!

ಹಸಿರ ಬಸಿರ ತುಂಬದ ಹತಾಷೆಯ!

- ಶರಧಿ 

Friday 8 April 2016

ಭರವಸೆಯ ರಶ್ಮಿ

ಭರವಸೆಯ ರಶ್ಮಿ 

ಕತ್ತಲ ಕಪ್ಪು ಕರಗಿಸುವ 
ಭರವಸೆಯ ರಶ್ಮಿಯು ಹೊಮ್ಮುತಿರಲು
ಆಕಾಂಕ್ಷೆಗಳು ಅತೀತದಲ್ಲಿ ಲೀನವಾಗಿ 
ನವ ಚೈತನ್ಯದ ಹುರುಪು 
ಹೊಸತನದ ಸೆಳವು 
ವಸಂತದ ಉಡುಗೆಯನುಟ್ಟು  
ಇಳೆಯು ಕಾಯುತಿಹಳು..
ಯುಗದ ಆದಿಯನ್ನು ಸ್ವಾಗತಿಸುತಿಹಳು.
-ಶರಧಿ 

Saturday 12 March 2016

ಬೆಳಕಿನ ಪಲ್ಲವಿ





ಬೆಳಕಿನ ಪಲ್ಲವಿ




             ಕತ್ತಲ ಕವಿತೆಗೆ ಬರೆದ ಬೆಳಕಿನ ಪಲ್ಲವಿ

             ಕಾರ್ಮೋಡದ ಅಂಚಿನಲಿ ಬೆಳಕಿನ ರವಿ

             ಭ್ರಾಮಕ ಜಗದೊಳಗೊಂದು ಸತ್ಯದ ದೀಪ


             ಬೆಳಕ ಅರಸುತ್ತ ಹೊರಟವನಿಗೆ ಹಾದಿಯು ಕತ್ತಲ ಕೂಪ


             ಸತ್ಯ ಮಿಥ್ಯೆಯ ಅಂತರ ತಿಳಿಯದವನಿಗೆ


             ಛಾಯೆಯೇ ಭಯ ಮೂಡಿಸಿಹುದು

             ಅಂತರವ ಅರಿತು ನಡೆದವನಿಗೆ


             ಕತ್ತಲು ಬೆಳಕಾಗುವುದು..


             ಬೆಳಕೂ ಬದುಕಾಗುವುದು..
                                                -ಶರಧಿ 


Sunday 24 January 2016

First acrylic canvas work



ಮರೀಚಿಕೆ



          ಸೆಲೆ ಬತ್ತು ಹೋಗುತ್ತಿದೆ. ಬಾಯಾರಿಕೆ ಆರಿಲ್ಲ. ನೀರಿನ ಅವಶ್ಯಕತೆ ಜೀವಕ್ಕಿದೆ,ಮನಸ್ಸಿಗೂ..
ದೇಹ ಆರೋಗ್ಯವಿದ್ರೆ ಮನಸ್ಸಿಗೂ ನೆಮ್ಮದಿ ಅಲ್ವಾ..ಮನಸ್ಸು ಹದಗೆಟ್ಟರೆ ದೇಹ ಪರಿತಪಿಸುತ್ತೆ. ಎಲ್ಲವು ಕ್ರಿಯೆಯೊಳಗೆ ಸಿಕ್ಕಿ ಹಾಕಿಕೊಂಡಿದೆ.

ನೀರಿನ ಸೆಲೆ ಮರೆಯಾಗುತ್ತಿರೋದನ್ನ ಕಂಡು ದೇಹ ಮನಸ್ಸು ಎರಡಕ್ಕೂ ಕಸಿವಿಸಿ. ಇಷ್ಟು ದಿನ ಆಧಾರವಾಗಿದ್ದು ಇಂದು ಕಾಣೆಯಾಗ್ತಿರೋದನ್ನ ಕಣ್ಣಾರೆ ಕಂಡಾಗ ಇಂತಹ ಸಂಕಟ ಸಹಜವೇ..

ಒಂದಂತು ಸತ್ಯ.. ಇಲ್ಲದ್ದು ಅಭ್ಯಾಸವಾದರೆ ಇದ್ದಾಗ ಕಿರಿ ಕಿರಿ ಅನ್ನಿಸೊಲ್ಲ..
ಅಲ್ಲಿ-ಇಲ್ಲಿ,ಆಗಾಗ ನೀರಿನ ಹರಿವು ಕಾಣತ್ತೆ,ಸೂರ್ಯನ ಬೆಳಕಲ್ಲಿ ಹೊಳಪ್ಪಾಗಿ,ಬಾಯಾರಿದಾಗ ಸಂಕಟ ಆರಿಸುವ ಆಧಾರವಾಗಿ,ಚಂದ್ರನ ಬೆಳಕಲ್ಲಿ ತಂಪಾಗಿ ಸ್ವಚ್ಚಂದವಾಗಿ ಕಾಣಿಸುತ್ತೆ.
ಆದರೆ..
ಈ ಮರೀಚಿಕೆಯ ಮಾಯೆ ಗಂಟಲಿಗೆ ಇಳಿದರೂ ದಾಹ ಇಂಗಿಸೋಲ್ಲ.. ಎದೆಯ ಉರಿ ತಣಿಸೋಲ್ಲ..
ಕಷ್ಟವಾಗತ್ತೆ ಕೆಲವು ಸಮಯ,ಅಭ್ಯಾಸವಾದರೆ ಎಲ್ಲವೂ ಸಹಜ. ಅಗತ್ಯವೆನಿಸಿದಾಗ ಉಪ್ಪು ನೀರು ಸಿಹಿ ಅನಿಸುತ್ತೆ..ಇನ್ನೊಮ್ಮೆ ಸಿಹಿ ನೀರು ಉದಯಿಸಿದರೂ ರುಚಿಸೋಲ್ಲ.!


ಬತ್ತಿದೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಗುಪ್ತಗಾಮಿನಿಯಾಗಿ ಮತ್ತೆಲ್ಲೋ ಹರಿಯುತ್ತೆ..ಮರೀಚಿಕೆಯಾಗಿ ಹೊಳೆಯುತ್ತೆ..ಕಣ್ಣಿಗೆ ಕಾಣದ,ಮನಸ್ಸಿಗೆ ಅರ್ಥವಾಗದ ಹರಿವು ಇದ್ದೇ ಇರುತ್ತದೆ ಎನ್ನೋ ನಂಬಿಕೆ.. ಅದರ ಆಧಾರದಲ್ಲೇ ಜೀವನ.. ಅದೇ ಸ್ವಾಭಾವಿಕ ಕ್ರಿಯೆ..!

Saturday 23 January 2016

ಗುಪ್ತಗಾಮಿನಿ


ಬಣ್ಣಗಳ ಜೊತೆ ಒಡನಾಟ ಪದಗಳೊಂದಿಗೆ ಕಿತ್ತಾಟ
ಯಾರಿಗೂ ಗೆಲುವಿಲ್ಲ ಎಂದಿಗೂ ಸೋಲಿಲ್ಲ..
ಭಾವದ ಹರಿವಿಗೆ ದಾರಿಯು ಹಲವು
ಗುರಿಯ ಸೇರುವ ದಾರಿಯು ಕೆಲವು
ನುಡಿಯು ಹೇಳಲಾರದ್ದು ನೋಟ ಹೇಳಿತು ನೋಟ ತಿಲಿಸಲಾಗದ್ದು ಬಣ್ಣ ಬಿಡಿಸಿತು
ಕುಂಚದ ಸಾಂಗತ್ಯ ಲೇಖನಿಯ ಆತಿಥ್ಯ
ಅವನಿಯ ಆಯ್ಕೆ ಯಾರದ್ದು!
ಯಾರು ಅರಿವರು ಗುಪ್ತಗಾಮಿನಿಯ ಸದ್ದು..!!