Monday 14 August 2017

ಅವಳು!




PC: google

ಅವನಿಗೆ ಅವಳೆಂದರೆ ಅದೇನೋ ಪ್ರೀತಿ. ಅವಳ ಕೈತುತ್ತಿಗೆ ತುಂಬಿದ ಹೊಟ್ಟೆಯಲ್ಲೂ ಒಂದಷ್ಟು ಜಾಗ. ಅವಳ ಹೃದಯದ ಕೂಗಿಗೆ ಅವನೆಂದಿಗೂ ಹತ್ತಿರ. ಜಗತ್ತಿಗೆ ಒಡೆಯನಾದರೂ ಅವಳೆದುರು ಪುಟ್ಟ ಮಗು. ಪರರ ಕಗ್ಗಂಟು ಬಿಡಿಸುವ ಅವನು, ತನ್ನ ಮನಸ್ಸಿನ ಮಾತಿಗೆ, ಕಿವಿ ಅವಳೇ ಆಗಬೇಕು. ತಾಯಿಯ ಪ್ರೀತಿಯ ಮಗ, ತಂದೆಯ ಹೆಮ್ಮೆ, ಸ್ನೇಹಿತರ ಪರಮಾಪ್ತ, ಹೆಂಗಳೆಯರ ಕಣ್ಮಣಿ. ಅವಳಿಗೆ ಅವನೇ ಎಲ್ಲ. ಅವನ ಬಳಗದಲ್ಲಿ ಅವಳಿಗೊಂದು ವಿಶೇಷ ಸ್ಥಾನ.

ಕಷ್ಟ ಎಂದಾಗ ಕರಗುವ ಹೃದಯ, ಇನ್ನು ಅವಳ ನೋವಿಗೆ ಸ್ಪಂದಿಸದೆ ಇರನೇ ? ಅವಳಿಗೋ ಧೈರ್ಯ ಹುಟ್ಟು ಗುಣ. ಸಕಲ ಕಲೆಯು ಅವಳಿಗೆ ಸಿದ್ಧ. ಹಠ ಅವಳ ವ್ಯಕ್ತಿತ್ವದ ಶೋಭೆ.ಅಪ್ರತಿಮ ಸುಂದರಿಯ ಸೌಂದರ್ಯಕ್ಕೆ ಸೋಲದವರೇ ಇಲ್ಲ. ಜಗದೇಕ ವೀರರ ಪತ್ನಿ... ಇನ್ನು ಕಷ್ಟದ ಮಾತೆಲ್ಲಿ? ಎನ್ನುವಾಗಲೇ ಅವಮಾನ-ಅಪಮಾನ-ಅಪಹಾಸ್ಯದ ಕೂಪಕ್ಕೆ ನೂಕಲ್ಪಡುತ್ತಾಳೆ.ಎಂದೂ ಸೋಲನೊಪ್ಪದ ಜಾಯಮಾನ ಅವಳದು. ಎಷ್ಟಾದರೂ ಅವನ ತಂಗಿಯಲ್ಲವೇ? ಅಷ್ಟಾದರೂ ಕಣ್ಣೀರು -ದುಃಖ ಅವಳ ಆವರಿಸುತ್ತದೆ.  ತನ್ನೈವರು ಮಕ್ಕಳ ಸಾವನ್ನು ಕಣ್ಣ ಮುಂದೆಯೇ ಕಳೆದುಕೊಂಡ ನತದೃಷ್ಟ ತಾಯಿಯಾಗುತ್ತಾಳೆ, ಅಲ್ಲೂ ಕುಗ್ಗ,ಸಂಯಮ ಕಳೆದುಕೊಳ್ಳುವ ಜಾಯಮಾನ ಅವಳದಲ್ಲ.  
ಅಲ್ಲೂ ಅವಳಿಗೆ ಸಾಂತ್ವನದ ಹನಿಯಾಗುವುದು ಅವನೇ!

ಅವಳ ನಂಬಿಕೆ ಅವನಲ್ಲಿ ಮಾತ್ರ! ಅವಳ ಕಣ್ಣಬಿಂದುಗಳು ಕಾಣುವುದು ಅವನಿಗೆ ಮಾತ್ರ! ಅದು ರಕ್ತಸಂಬಂಧದ ಬೇಲಿಯೊಳಗಿನ ಬಂಧವಾಗಿರಲಿಲ್ಲ. ಅಲ್ಲಿ ಪ್ರೀತಿ ಇದೆ. ಕಾಳಜಿ ಇದೆ. ವಾತ್ಸಲ್ಯದ ಒಡನಾಟವಿದೆ. ತುಂಟ ನಗೆ ಇದೆ. ಹುಸಿ ಮುನಿಸಿದೆ. ಪ್ರೇಮದ ಬಂಧವಿದೆ. ಭಕ್ತಿಯ ಭಾವವಿದೆ!
ಅವಳ ಸೌಂದರ್ಯಕ್ಕೆ ಅವನದೇ ಬಣ್ಣವಿದೆ.ಲೋಕ ಅವಳನ್ನು ಅವನ ಸಖಿ, ಸೋದರಿ, ಸ್ನೇಹಿತೆ ಎಂದಿತು. ಜಗತ್ತಿಗೆ ಅವಳು ದ್ರೌಪದಿ, ಯಾಜ್ಞಸೇನಿ !

ಆದರೆ ಅವನು ಅವಳಿಗೆ ಕೊಟ್ಟ ಹೆಸರು ಕೃಷ್ಣೆ! 
ಅವಳು ಅವನದೇ ಅಂಶವಾಗಿದ್ದಳು!