Tuesday 26 April 2016

ಇಳೆಯ ಆರ್ತನಾದ



ಇಳೆಯ ಆರ್ತನಾದ 

ಬಿರು ಬಿಸಿಲಿನ ಅಟ್ಟಹಾಸವೋ
ಬರಿದಾದ ಬಿರುಕು ಭೂಮಿಯೋ
ಯಾರ ಬಳಿಯಲಿ ಬಿಕ್ಕಳಿಸಲಿ
ಈ ಬೇಗುದಿಯ, ಬಾಯಾರಿದ ಸಂಕಟವ!
ಹಸಿರ ಬಸಿರ ತುಂಬದ ಹತಾಷೆಯ!

ನದಿಯ ನಾದವದು ಕೇಳದಾಗಿದೆ
ಹಾಹಾಕಾರದ ಆಕ್ರಂದವೇ ಪ್ರತಿದ್ವನಿಸುತಿದೆ!
ಹಚ್ಚ ಹಸಿರ ಕಾನನವದು ಕಾಣದಾಗಿದೆ
ಅಳಲ ತೋಡಿಕೊಳ್ಳುವ ಮಡಿಲದು ಬರಿದಾಗಿದೆ
ಯಾರ ಬಳಿಯಲಿ ಬಿಕ್ಕಳಿಸಲಿ
ಬಾಯಾರಿದ ಸಂಕಟವ!
ಹಸಿರ ಬಸಿರ ತುಂಬದ ಹತಾಷೆಯ!

ಎಳೆ ಬಿಸಿಲ ಹಿತವು, ಕಲರವದ ಕಂಪು
ತುಂತುರು ಮಳೆಯ ತಂಪು
ಕಾಡುತಿಹುದು ಸ್ವಪ್ನದಂತೆ
ವಾಸ್ತವದ ಕೆಂಗಣ್ಣು ನೋಡುತಿಹುದು
ಎನ್ನ ಬಾಯಾರಿದ ಸಂಕಟವ!
ಹಸಿರ ಬಸಿರ ತುಂಬದ ಹತಾಷೆಯ!

ಪ್ರಕೃತಿ ನಾನು ಏಕಾಂಗಿಯಾದೆ
ಜೀವದ ಕುರುಹೇ ಕಾಣದಾಗಿದೆ
ಕಾರ್ಮೋಡವದು ಓಡುತಿಹುದು
ಎನ್ನ ಏಕಾಂಗಿ ಮಾಡಿಹುದು
ಅರಿಯದೆ ನನ್ನೀ ಬಾಯಾರಿದ ಸಂಕಟ!

ಹಸಿರ ಬಸಿರ ತುಂಬದ ಹತಾಷೆಯ!

- ಶರಧಿ 

Friday 8 April 2016

ಭರವಸೆಯ ರಶ್ಮಿ

ಭರವಸೆಯ ರಶ್ಮಿ 

ಕತ್ತಲ ಕಪ್ಪು ಕರಗಿಸುವ 
ಭರವಸೆಯ ರಶ್ಮಿಯು ಹೊಮ್ಮುತಿರಲು
ಆಕಾಂಕ್ಷೆಗಳು ಅತೀತದಲ್ಲಿ ಲೀನವಾಗಿ 
ನವ ಚೈತನ್ಯದ ಹುರುಪು 
ಹೊಸತನದ ಸೆಳವು 
ವಸಂತದ ಉಡುಗೆಯನುಟ್ಟು  
ಇಳೆಯು ಕಾಯುತಿಹಳು..
ಯುಗದ ಆದಿಯನ್ನು ಸ್ವಾಗತಿಸುತಿಹಳು.
-ಶರಧಿ