Monday 19 June 2017

ವ್ಯಾಪಾರಿ



PC: Google

ಸರಿರಾತ್ರಿಯಲ್ಲಿ ತಂಗಾಳಿಯ ಲಾಲಿತ್ಯ 
ಹೆಜ್ಜೆಯ ಸಪ್ಪಳದಲ್ಲಿ ಕಾಡುತ್ತಿದ್ದ ಸಾಂಗತ್ಯ ;
ಮಬ್ಬು ಮಬ್ಬಾದ ಮುಸುಕಲ್ಲಿ
ಛಾಯೆಯ ಸಪ್ತಪದಿ; ಯಾರಲ್ಲಿ?!
ಅವನು ವ್ಯಾಪಾರಿ
ಊರು  ಕೇರಿಯ ದಿಶೆಯಿಲ್ಲದೆ ತಿರುಗುವ ಸಂಚಾರಿ!
ಕನಸಿನ ಕೈಚೀಲ ಹಿಡಿದಿದ್ದ , ಅಲ್ಲಲ್ಲಿ ಹರಿದಿತ್ತು;
ಬಣ್ಣದ ಬಣ್ಣದ ತೇಪೆಯೊಂದಿಗೆ ಜೋಳಿಗೆ ಇಣುಕುತ್ತಿತ್ತು.

ವಶೀಕರಣದ ವಿದ್ಯೆ ಅವನಿಗದು ಸಿದ್ಧ!
ಕಾಮನಬಿಲ್ಲುಗಳ ಸರಕುಗಳ ಸದ್ದಿಲ್ಲದೆ ಮಾರಿದ್ದ
ಸ್ವಪ್ನಗಳ ಸಾಲವದು!
ನಾ ಅನಿವಾರ್ಯದ ಸಾಲಗಾರನಾದೆನೇ?
ಇಲ್ಲ! ತೀರಿಸುವ ಉಮೇದಿತ್ತು ; ಮತ್ತೊಮ್ಮೆ ಎರವಲು ಪಡೆಯುವ ಆಸೆಯೂ..

ನಶೆಯ-ಉಷೆಯ ಕಣ್ಣಾಮುಚ್ಚಾಲೆಯಲಿ 
ಸರಕು ಖಾಲಿಯಾಗಿತ್ತು; ಬಣ್ಣ ಮಾಸಿತ್ತು;
ಮತ್ತೆ ಕಾಯುತಿರುವೆ ತಾಮಸದ ತಿಳಿಬೆಳಕ ನೆರಳಲ್ಲಿ;
ಪಡೆವ ಬಯಕೆಯೋ? ತೀರಿಸುವ ಉನ್ಮಾದವೋ? ತಿಳಿಯದು;
ಇರಲಿ ನನ್ನಲ್ಲಿಯೇ ಈ ಋಣಭಾರ;
ಆಗಾಗ ಇದ್ದುಬಿಡು ! ಕೊಡುವೆ ಉಸಿರ ಕಾವ ಬಾಡಿಗೆ;
ಮತ್ತೊಮ್ಮೆ ಸಂಧಿಸೋಣ, ನೆರಳು ಬೆಳಕಿನ ಲಜ್ಜೆಯಲ್ಲಿ!
ನಡೆಯಲಿ ವ್ಯಾಪಾರ ವಿನಿಮಯ; 
ಮತ್ತೆಂದೂ ತೀರಿಸುವ ಮಾತೇ ಬೇಡ!

~ಶರಧಿ 

Wednesday 7 June 2017

ನಾ ಮೀರಳೋ? ರಾಧೆಯೋ?



ಹಗಲು ರಾತ್ರಿ ಭಿನ್ನವೆನಿಸದು
ಕನಸಿನಲ್ಲಿ ಕಾಡಿ ಎಚ್ಚರಿಸುವಾಗ,
ಎದ್ದರೂ ಮೈಮರೆಯುವಾಗ,
ಅಲ್ಲೆಲ್ಲೋ ಕೇಳಿದ ಕೊಳಲ ನಾದ..
ಮತ್ತೊಮ್ಮೆ ನವಿಲುಗರಿಯ ಸ್ಪರ್ಶ
ತನ್ಮಯತೆಯ ಅನುಭವವು ಆವರಿಸಿತಾಗ!
ನೀಲ ಮೇಘ ವರ್ಣದವ ನೀನು
ಎಂದಿಗೂ ನಿಗೂಢ
ಇದ್ದುಬಿಡಲೇ ನಾ ಸಖಿಯಾಗಿ? ಪ್ರಿಯ ರಾಧೆಯಾಗಿ?
ಒಮ್ಮೊಮ್ಮೆ ದೇವಕಿಯಾಗಿ!?
ನಾ ಮೀರಳೋ, ಭಾಮೆಯೊ?
ಅರಿವ ಆಸೆ ಎನಗಿಲ್ಲ.
ಕಡಲ ನೀರಿನಲ್ಲಿ ಬಿಂಬ ಹುಡುಕುವ ಹಂಬಲವೆನಗಿಲ್ಲ
ಆ ಪ್ರತಿ ಅಲೆಯಲ್ಲೂ ನಾ ಕಾಣಬೇಕು!
ಆ ಭಾವದಲ್ಲೇ ಬಂಧಿಯಾಗಬೇಕು!
ಅಲ್ಲಿಯೇ ಲೀನವಾಗಬೇಕು!

~ಶರಧಿ