Saturday 1 April 2017

ಮುನಿಸು ತರವೇ…

    


     ಅಂದಿನಿಂದ ಒಬ್ಬರನ್ನೊಬ್ಬರು ನೋಡಿಲ್ಲ. ಬಹುಶಃ ತಿಂಗಳುಗಳೇ ಕಳೆಯಿತು. ಮೃದು ಸ್ಪರ್ಶದ ಅರಿವಿಲ್ಲ. ನಾವಿಬ್ಬರು ಜೊತೆಗಿದ್ದಾಗ ನನ್ನಲ್ಲಿ ಮೂಡುತ್ತಿದ್ದ ಹೊಳಪೇ ಇಂದು ಕಾಣದಾಗಿದೆ. ಒಂದಷ್ಟು ದಿನ ಆರಾಮಾಗಿದ್ದೆ. ನಿನ್ನ ನೆನಪೇ ಬಾರದ ಹಾಗೆ ಬದುಕುತ್ತಿದ್ದೆ.ಆದರೆ ಇಂದು..
ನೀನು ಬಹಳ ಕಾಡ್ತಿಯ. ನಿನ್ನ ನೆನೆದೊಡನೆ ಬಣ್ಣಗಳೇ ಬಲೆ ಕಟ್ಟುತ್ತವೆ. ಕಪ್ಪು -ಬಿಳುಪು, ನೀಲ ಸುವರ್ಣ ,ಹಸಿರು  ಕೆಂಪು ..ಮತ್ತಷ್ಟು ಮೊಗದಷ್ಟು ಬಣ್ಣಗಳ ಕಲಸಿಕೊಂಡು ನೀ ಮೂಡಿಸುತ್ತಿದ್ದ ಆ ಚಿತ್ತಾರಗಳಲ್ಲಿ ಬೆರೆತು ಹೋಗುತ್ತಿದ್ದೆ, ಕಲೆತು ಹೋಗುತ್ತಿದ್ದೆ. ಸ್ಮೃತಿಪಲಟದಲ್ಲಿ ನಿನ್ನ ಚಿತ್ರಗಳು ಇಂದಿಗೂ ಚಿರಪರಿಚಿತ. ನಾವಿಬ್ಬರು ಅದೆಷ್ಟು ಚಿತ್ರಗಳ ಬರೆದಿಲ್ಲ! ನಾವೇನು ಕಡಿಮೆ ಕಿತ್ತಾಡಿದ್ದೇವಾ! ಬಿಳಿ ಹಾಳೆಯೊಂದಿಗೆ ಏನೂ ಬರೆಯದ ನಾನು, ನೀ ಜೊತೆ ಇದ್ದರೆ ಸಾಕು ಸಂಪೂರ್ಣ ವರ್ಣಮಯ. ಬಣ್ಣಗಳಿಂದ ತುಂಬಿಹೋಗಿತ್ತು  ಖಾಲಿ ಕಾಗದ, ನನ್ನ ಜೀವನ!
ಆ ಮುನಿಸು ಶುರು ಆದದ್ದು ಹೇಗೋ ತಿಳಿಯದು.  ಅದೇಕೋ ಹೊಂದಾಣಿಕೆಯೇ ಇಲ್ಲ.  ನೀ ಬಿಡಿಸಿದ್ದು ನನಗೆ ಹಿಡಿಸದು, ನಾ ಯೋಚಿಸಿದ್ದು ನಿನಗೆ ತಿಳಿಯದು! ನಮ್ಮ ಈ ಕಿತ್ತಾಟದಲ್ಲಿ ಅದೆಷ್ಟು ಹಾಳೆಗಳು ಮುದುರಿ ಹೋಗಿವೆಯೋ ! ಅದೆಷ್ಟು ಬಣ್ಣಗಳು ಕಣ್ಣೀರು ಸುರಿಸಿದವೋ!ನಿನ್ನ ಸಹವಾಸವೇ ಬೇಡ ಎಂದು ನಿನ್ನ ನಿಧಾನವಾಗಿ ದೂರ ತಳ್ಳಿದೆ. ನೀನು ಅಷ್ಟೇ ಕಣ್ಣಿಗೆ ಕಾಣದ ಹಾಗೆ ಎಲ್ಲೋ ಅಡಗಿ ಕುಳಿತೆ. ಸ್ವಲ್ಪ ಕಾಲ ಮರೆತೆ. ಆದರೆ ಈಗ?
ಇಲ್ಲ! ನಿನ್ನ ಬಿಟ್ಟಿರಲು ನನಗೆ ಸಾಧ್ಯವಿಲ್ಲ. ನಿನ್ನ ಹಠವೇ ಗೆಲ್ಲಲಿ ಆದರೆ ಅದು ನನ್ನ ಸೋಲಲ್ಲ. ನನ್ನ ಗೆಲುವೂ ನಿನ್ನ ಜಯವೇ.ಆ ಸಾಂಗತ್ಯ, ಒಡನಾಟ ಮತ್ತೆ ಬೇಕು. ನನ್ನ ಭಾವದ ಹರಿವಿಗೆ ನೀನಲ್ಲದೆ ಮತ್ತಾವ ದಾರಿ ಹುಡುಕಲಿ. ಕುಂಚದ ಸಾಂಗತ್ಯವಲ್ಲದೆ ಬಣ್ಣಕೆ ಬದುಕಿಲ್ಲ!
ಈ ಬಣ್ಣ ಕರಗುವ ಮೊದಲೇ ಮೂಡಿಸುವ ಸುಂದರ ಚಿತ್ತಾರವ! ಅಳಿಸಲಾಗದ ಹಸ್ತಾಕ್ಷರವ!
                                                                                                   ಇಂತಿ ನಿನ್ನ ಪ್ರೀತಿಯ,       
                  ಬಣ್ಣಗಳ ಹುಡುಕಾಟದಲ್ಲಿ ಕಳೆದುಹೋಗಿರುವ , ಕುಂಚದ ಸಾಂಗತ್ಯ ಹಂಬಲಿಸುತ್ತಿರುವ  ಕಲಾವಿದೆ
          
                                                                                       

7 comments: